ಮದುರೈ
	ತಮಿಳುನಾಡು ರಾಜ್ಯದ ಒಂದು ಜಿಲ್ಲೆ ಮತ್ತು ಜಿಲ್ಲಾ ಆಡಳಿತ ಕೇಂದ್ರ. ಕೈಗಾರಿಕಾ ನಗರ. ಜಿಲ್ಲೆಯನ್ನು ಪೂರ್ವದಲ್ಲಿ ರಾಮನಾಥಪುರಮ್, ಪುದುಕ್ಕೋಟ್ಟೈ ಜಿಲ್ಲೆಗಳೂ ಉತ್ತರದಲ್ಲಿ ತಿರುಚ್ಚಿರಾಪ್ಪಳ್ಳಿ, ಕೊಯಮತ್ತೂರು ಜಿಲ್ಲೆಗಳೂ ದಕ್ಷಿಣದಲ್ಲಿ ತಿರುನೆಲ್ವೇಲಿ ಜಿಲ್ಲೆಯೂ ಪಶ್ಚಿಮದಲ್ಲಿ ಕೇರಳ ರಾಜ್ಯವೂ ಸುತ್ತುವರಿದಿವೆ. ದಕ್ಷಿಣಭಾರತದ ಮೈದಾನ ಪ್ರದೇಶ ಈ ಜಿಲ್ಲೆಯಲ್ಲಿ ವ್ಯಾಪಿಸಿದೆ. ಉತ್ತರದಲ್ಲಿ ಪಳನಿ ಮತ್ತು ಸಿರುಮಲೈ ಬೆಟ್ಟಗಳೂ ದಕ್ಷಿಣದಲ್ಲಿ ವರುಸನಾದ ಮತ್ತು ಅಂಡಿಪತ್ತಿ ಬೆಟ್ಟಗಳೂ ಇವೆ. ಪಶ್ಚಿಮದಲ್ಲಿ ಜಿಲ್ಲೆಯ ಎಲ್ಲೆಯಾಗಿ ಪಶ್ಚಿಮ ಘಟ್ಟ ಮತ್ತು ಕಂಬಮ್ ಕಣಿವೆ ಇವೆ. ಪೂರ್ವಕ್ಕೆ ಹೋದ ಹಾಗೆ ಸಮುದ್ರಮಟ್ಟದಿಂದ 90 ಮೀಟರ್ ಎತ್ತರದ ಮೈದಾನ ಪ್ರದೇಶವಿದೆ. ಇಲ್ಲಿ ದೂರದೂರಕ್ಕೆ ಒಂದೊಂದು ಬೆಟ್ಟಗಳಿರುವುದನ್ನು ಕಾಣಬಹುದು. ಜಿಲ್ಲಾ ವಿಸ್ತೀರ್ಣ 12,716 ಚ.ಕಿಮೀ. ಜನಸಂಖ್ಯೆ 45,35,897 (1981).

	ಇಲ್ಲಿಯ ಮುಖ್ಯನದಿ ವೈಗೈ. ಇದು ಕಂಬಮ್ ಕಣಿವೆ ಮೂಲಕ ಈಶಾನ್ಯಾಭಿ ಮುಖವಾಗಿ ಹರಿದು ಮುಂದೆ ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ರಾಮನಾಥಪುರಮ್ ಜಿಲ್ಲೆಯ ರಾಮನಾಥಪುರಮ್ ಬಳಿ ಪಾಕ್ ಜಲಸಂಧಿ (ಬಂಗಾಳಕೊಲ್ಲಿ) ಸೇರುವುದು. ಮದುರೈ ಕೃಷಿ ಪ್ರಧಾನ ಜಿಲ್ಲೆ. ಪೆರಿಯರ್ (1895) ಮತ್ತು ವೈಗೈ (1960) ನೀರಾವರಿ ಯೋಜನೆಯಿಂದ ಈ ಜಿಲ್ಲೆ ಕೃಷಿಯಲ್ಲಿ ಸಾಕಷ್ಟು ಮುನ್ನಡೆದಿದೆ. ನೆಲಗಡಲೆ, ಹತ್ತಿ, ಕಬ್ಬು, ಕಾಫಿ, ಏಲಕ್ಕಿ, ಆಲೂಗಡ್ಡೆ, ಇಲ್ಲಿಯ ಆರ್ಥಿಕ ಬೆಳೆಗಳು ಬತ್ತ ಮತ್ತು ದ್ವಿದಳ ಧಾನ್ಯಗಳನ್ನೂ ಬೆಳೆಸುವರು. ಜಿಲ್ಲೆಯ ಮುಖ್ಯ ಕೈಗಾರಿಕೆಗಳೆಂದರೆ ಹತ್ತಿ ನೂಲುವುದು, ನೇಯುವುದು, ಹೊಗೆಸೊಪ್ಪು ಮತ್ತು ಸಕ್ಕರೆ ಉತ್ಪಾದನೆ, ಯಂತ್ರಗಳ ಬಿಡಿಭಾಗಗಳ ತಯಾರಿಕೆ ಇತ್ಯಾದಿ, ರೇಷ್ಮೆ ಮತ್ತು ಹತ್ತಿ ಕೈಮಗ್ಗದ ಬಟ್ಟೆ ತಯಾರಿಕೆಗೆ ಈ ಭಾಗ ಮೊದಲಿಂದಲೂ ಪ್ರಸಿದ್ಧ. ಮದುರೈಗೆ ರೈಲು ಸಂಪರ್ಕವಿದೆ. ಇದು ದಕ್ಷಿಣ ರೈಲ್ವೆಯ ಒಂದು ಮುಖ್ಯ ನಿಲ್ದಾಣ. ರಾಜ್ಯ ಹೆದ್ದಾರಿಯ ಇತರ ಸಂಪರ್ಕ ಸಾಧನಗಳಾದ ಅಂಚೆ, ತಂತಿ ದೂರವಾಣಿ ಮುಂತಾದವುಗಳ ಸೌಲಭ್ಯ ಇಲ್ಲಿದೆ. ಕೊಡೈಕಾನಲ್ ಮತ್ತು ದಿಂಡಿಗಲ್ (ನೋಡಿ- ದಿಂಡಿಗಲ್) ಈ ಜಿಲ್ಲೆಗೆ ಸೇರಿದ ಮುಖ್ಯ ಪಟ್ಟಣಗಳು.

	ಮದುರೈ ನಗರ ವೈಗೈ ನದಿಯ ಬಲದಂಡೆಯ ಮೇಲಿದೆ. ಉತ್ತರ ಅಕ್ಷಾಂಶ 9.55, ಪೂರ್ವ ರೇಖಾಂಶ 78.9. ಭಾರತದ ಒಂದು ಪುರಾತನ ಹಾಗೂ ಪವಿತ್ರ ಯಾತ್ರಾಸ್ಥಳವೆಂದೂ ಇದು ಪ್ರಸಿದ್ಧ. ಜನಸಂಖ್ಯೆ 9,07,732(1981). ಇಲ್ಲಿ ಪ್ರಸಿದ್ಧ ಮೀನಾಕ್ಷಿ ದೇವಾಸ್ಥಾನವಿದೆ. ಈ ದೇವಸ್ಥಾನದಲ್ಲಿ ಹತ್ತು ಎತ್ತರವಾದ ಗೋಪುರಗಳಿವೆ. ಇವುಗಳ ಪೈಕಿ ಅತ್ಯಂತ ಉನ್ನತವಾದ ಗೋಪುರ ಸುಮಾರು 46 ಮೀಟರು ಎತ್ತರವಾಗಿದೆ. ದೇವಾಲಯದಲ್ಲಿ ನಾಯಕ ಸಂತತಿಯ ಮೊದಲನೆಯ ದೊರೆ ವಿಶ್ವನಾಥ ಕಟ್ಟಿಸಿದ 100 ಕಂಬಗಳಿಂದ ಕೂಡಿರುವ ವಿಶಾಲ ಸಭಾಂಗಣ ಇದೆ. ಈ ದೇವಾಸ್ಥಾನ ದ್ರಾವಿಡ ಕಲೆ ಮತ್ತು ಕೆತ್ತನೆ ಕೆಲಸಕ್ಕೆ ಪ್ರಸಿದ್ಧ. 1623ರಲ್ಲಿ ತಿರುಮಲನಾಯಕ ಕಟ್ಟಿಸಿದ ಅರಮನೆ ಇದೆ. ಮೀನಾಕ್ಷಿ ಸುಂದರೇಶ್ವರ ದೇವಾಲಯ, ತೆಪ್ಪಕೊಳಮ್ ಇವೆಲ್ಲ ಆಕರ್ಷಕವಾದವು. ನಗರ ಹಿತ್ತಾಳೆ ಮತ್ತು ಮರದ ಕೆತ್ತನೆ ಕೆಲಸಕ್ಕೆ ಪ್ರಸಿದ್ಧ. ಬತ್ತಿ ನೂಲುವ ಮತ್ತು ನೇಯುವ ದೊಡ್ಡ ಕಾರ್ಖಾನೆಗಳಿವೆ. ವಾಹನಗಳ ಬಿಡಿಭಾಗಗಳ ತಯಾರಿಕಾ ಕಾರ್ಖಾನೆ, ಹೊಗೆಸೊಪ್ಪು, ಸಕ್ಕರೆ ತಯಾರಿಕಾ ಕಾರ್ಖಾನೆಗಳ ಜೊತೆಗೆ ಹತ್ತಿ ಮತ್ತು ರೇಷ್ಮೆ ನೂಲುವುದಕ್ಕೆ ಈ ನಗರ ಪ್ರಸಿದ್ಧ. ಮದ್ರಾಸಿನ ನೈಋತ್ಯಕ್ಕೆ ಸುಮಾರು 435 ಕಿಮೀ ದೂರದಲ್ಲಿರುವ ಈ ನಗರ ಇಂದು ತಮಿಳುನಾಡಿನ ದೊಡ್ಡ ನಗರಗಳ ಪೈಕಿ ಎರಡನೆಯದು. ಮದುರೈ ವಿಶ್ವವಿದ್ಯಾಲಯ (1966) ಮತ್ತು ಅನೇಕ ಶಾಲಾ ಕಾಲೇಜುಗಳು ಇಲ್ಲಿವೆ. ಆಧುನಿಕ ನಗರದ ಸಮಸ್ತ ಸೌಕರ್ಯಗಳನ್ನೂ ಈ ಕೈಗಾರಿಕಾ ನಗರ ಪಡೆದಿದೆ. 

	ಇತಿಹಾಸ ಪ್ರಸಿದ್ಧ ಮದುರೈ ನಗರದ ಪ್ರಾಚೀನತೆಯನ್ನು ಸಂಗಮ್ ಕಾಲದ ತಮಿಳು ಕೃತಿಗಳ ಮೂಲಕ ಕ್ರಿಸ್ತ ಶಕದ ಪ್ರಾರಂಭಕಾಲಕ್ಕೇ ಗುರುತಿಸಬಹುದಾಗಿದೆ. ಆಗ ಅದು ಪಾಂಡ್ಯವಂಶದ ರಾಜರ ರಾಜಧಾನಿಯಾಗಿತ್ತು. ನೆಡುಂಚಳಿಯನ್ (ಕ್ರಿ.ಶ. 150) ಮುಂತಾದ ಅನೇಕ ಶ್ರೇಷ್ಠ ರಾಜರು ಆ ನಗರ ನೆಲೆಯಿಂದಲೇ ರಾಜ್ಯವಾಳಿದರು. ಆ ಕಾಲದ ತಮಿಳು ಸಾಹಿತ್ಯದಲ್ಲಿ ಮದುರೈ ನಗರದ ನಗರಯೋಜನೆ, ಕೋಟಿಕೊತ್ತಳ ನಿರ್ಮಾಣ, ಅರಮನೆ, ಮಾರುಕಟ್ಟೆ ಇತ್ಯಾದಿಗಳ ವರ್ಣನೆಗಳು ಬಂದಿವೆ. ಆಗ ಅದು ಶ್ರೀಮಂತ ವ್ಯಾಪಾರಿಗಳಿಂದ ಮತ್ತು ರಾಜಸೌಧಗಳಿಂದ ತುಂಬಿದ ಸಂಪದ್ಭರಿತ ನಗರವಾಗಿತ್ತು. ಮದುರೈ-ಕಾಂಚಿ, ಪುರನಾನೂರು ಮತ್ತು ಪರಿಪಾಡಲ್ ಮೊದಲಾದ ತಮಿಳು ಗ್ರಂಥಗಳು ಮದುರೈ ನಗರದ ರಾಜಕೀಯ ಹಾಗೂ ಸಾಂಸ್ಕøತಿಕ ಪ್ರಾಮುಖ್ಯವನ್ನು ಉಲ್ಲೇಖಿಸುತ್ತವೆ. ಆಗ ಮದುರೈ ತಮಿಳಿನ ಒಂದು ಮಹಾ ವಿದ್ಯಾಕೇಂದ್ರವಾಗಿತ್ತು. ಪ್ರಾಚೀನ ಸಂಪ್ರಾದಾಯದಂತೆ ರಾಜರಿಂದ ಪೋಷಣೆ ಪಡೆದ ತಮಿಳು ಕವಿಗಳ, ತಮಿಳು ವಿದ್ವಾಂಸರ ಅಕಾಡೆಮಿ ಅಥವಾ ಸಂಘವೊಂದು ಅಲ್ಲಿತ್ತು. ಆ ಸಂಸ್ಥೆ, ತಮಿಳು ಸಾಹಿತ್ಯದ ಉತ್ತಮ ಕೃತಿಗಳ ನಿರ್ಮಾಣಕ್ಕೆ ಅವಕಾಶವೊದಗಿಸುತ್ತಿತ್ತು. ಶಿಲಪ್ಪದಿಕಾರಮ್ ಹಾಗೂ ಮಣಿಮೇಖಲೈ ತಮಿಳು ಪೌರಾಣಿಕ ಮಹಾಕಾವ್ಯಗಳು ಮದುರೈ ನಗರದ ಸುಂದರ ವರ್ಣನೆಯನ್ನು ಒಳಗೊಂಡಿವೆ. ಶಿಲಪ್ಪದಿಕಾರಮ್ ಮಹಾಕಾವ್ಯದ ನಾಯಕ ಕೋವಲನ್ನನ್ನು ಪಾಂಡ್ಯ ಅರಸಿಯ ಕಂಕಣ ಕದ್ದನೆಂಬ ಅಪಾದನೆಯ ಮೇರೆಗೆ ಹಿಡಿದು ರಾಜಾಜ್ಞೆಯ ಪ್ರಕಾರ ತಲೆ ಕಡಿಯುತ್ತಾರೆ. ಕೋವಲನ ಹೆಂಡತಿ ಕನ್ನಗಿ. ತನ್ನ ಪತಿ ನಿರ್ದೋಷಿಯೆಂದು ಸಿದ್ಧಮಾಡುತ್ತಾಳೆ. ಆಗ ಮಹಾರಾಜ ನೆಡುಂಚಳಿಯನ್ ಆದ ಅನ್ಯಾಯವನ್ನು ಅರಿತು ಮರಣಹೊಂದುತ್ತಾನೆ. ಅನಂತರ ಕನ್ನಗಿ ಮದುರೈ ಸುಟ್ಟು ಹೋಗಲಿ ಎಂದು ಶಾಪವಿತ್ತಳೆಂದು ಹೇಳಲಾಗುತ್ತದೆ. ಈ ಚಿತ್ತವೇಧಕ ಘಟನೆಯೆ ಶಿಲಪ್ಪದಿಕಾರಮ್ ಕಾವ್ಯದ ಕಥಾಪ್ರಸಂಗ.

	ಮದುರೈ ನಗರ ಪಾಂಡ್ಯರ ರಾಜಧಾನಿಯಾಗಿ ಮುಂದುವರಿಯಿತು. ಕಡಂಗೊವನ್ ವಂಶಸ್ಥ ಪಾಂಡ್ಯರಾಜರು ಕ್ರಿ.ಶ. 6ನೆಯ ಶತಮಾನದಿಂದ 9ನೆಯ ಶತಮಾನದ ತನಕ ರಾಜಧಾನಿ ಮದುರೈನಿಂದಲೇ ರಾಜ್ಯವಾಳಿದರು. ಈ ಕಾಲವನ್ನು ಪಾಂಡ್ಯರ ಮೊದಲ ಯುಗವೆನ್ನುವರು. ಚೋಳ ಪರಾಂತಕ 10ನೆಯ ಶತಮಾನದಲ್ಲಿ ಆರಂಭದಲ್ಲಿ ಈ ನಗರವನ್ನು ಜಯಿಸಿದ. ಇದರಿಂದ ಸ್ವಲ್ಪಕಾಲ ಮದುರೈ ಚೋಳರ ಆಧಿಪತ್ಯಕ್ಕೊಳಪಟ್ಟಿತ್ತು. 12ನೆಯ ಶತಮಾನದಲ್ಲಿ ಪಾಂಡ್ಯರು ಇದನ್ನು ಪುನಃ ಗೆದ್ದುಕೊಂಡು ಕ್ರಿ.ಶ. 1310ರ ತನಕ ಆಳಿದರು. ಈ ಅವಧಿಯನ್ನು ಪಾಂಡ್ಯರ ಎರಡನೆಯ ಯುಗವೆಂದು ಹೇಳುವರು. ಈ ಕಾಲದಲ್ಲಿ ಪಾಚಿಡ್ಯ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿಯ ಒಂದು ದೊಡ್ಡ ಸಾಮ್ರಾಜ್ಯವಾಗಿದ್ದು ಕನ್ಯಾಕುಮಾರಿಯಿಂದ ಆಂಧ್ರಪ್ರದೇಶದ ನೆಲ್ಲೂರಿನ  ವರೆಗೆ ಹಬ್ಬಿತ್ತು. ಕ್ರಿ.ಶ 14ನೆಯ ಶತಮಾನದಲ್ಲಿ ಪಾಂಡ್ಯ ಸಾಮ್ರಾಜ್ಯ ಹಾಗೂ ಮಧುರೈ ನಗರ ಮುಸ್ಲಿವ್ಮರ ದಾಳಿಗೆ ತುತ್ತಾದವು. ಕ್ರಿ.ಶ. 1310ರಲ್ಲಿ ಇಲ್ಲಿಗೆ ಬಂದ ಮಲ್ಲಿಕೆ ಕಾಫರ್ ನಿಂದ ಮೊದಲನೆಯ ಸಲ ಮತ್ತು ಮಹಮ್ಮದ್ ತುಘಲಕ್ ನಿಂದ ಎರಡನೆಯ ಸಲ ಮದುರೈ ನಗರ ಹಾಳಾಯಿತು. ಕ್ರಿ. ಶ. 1335-71ರ ಮಧ್ಯಕಾಲದಲ್ಲಿ ಮದುರೈ ಸುಲ್ತಾನರು ಈ ನಗರವನ್ನು ಆಳಿದರು. ಕ್ರಿ.ಶ. 1370-71ರಲ್ಲಿ ವಿಜಯನಗರದ ಸೇನಾನಾಯಕ ಕಂಪಣರಾಯ ಮದುರೈ ಸುಲ್ತಾನರನ್ನು ಸೋಲಿಸಿ ವಿಜಯನಗರದ ಆಧಿಪತ್ಯ ಸ್ಥಾಪಿಸಿದ. ಅಲ್ಲಿಂದ ಮುಂದೆ ಮದುರೈ ವಿಜಯನಗರದ ಮಾಂಡಲಿಕರ ಆಡಳಿತಕ್ಕೊಳಪಟ್ಟಿತು. ಅವರನ್ನು ಮದುರೈ ನಾಯಕರೆಂದು ಕರೆಯುತ್ತಾರೆ. ಅವರಲ್ಲಿ ತಿರುಮಲೈನಾಯಕರ್ (ಕ್ರಿ.ಶ.17ನೆಯ ಶತಮಾನ) ಬಲು ಪ್ರಸಿದ್ಧನಾದವನು. ಮುಂದೆ ಸ್ವಲ್ಪಕಾಲ ಮರಾಠ ಆಡಳಿತಕ್ಕೂ ಸೇರಿದ್ದು ಅನಂತರ ಸುಮಾರು 1736ರಲ್ಲಿ ಕರ್ನಾಟಕದ ನವಾಬನಿಗೆ ಸೇರಿತು. ಮುಂದೆ 1801ರಿಂದ ಬ್ರಿಟಿಷರ ಆಡಳಿತಕ್ಕೆ ಸೇರಿತು.

	ಪ್ರಾಗಿತಿಹಾಸದ ದೃಷ್ಟಿಯಿಂದ ಮದ್ಯರೈ ನಗರದ ಸುತ್ತಮುತ್ತಲಿನ ಪ್ರಮುಖ ಸ್ಥಳಗಳೆಂದರೆ; ಸಮರ ಬೆಟ್ಟ, (ಸವಣರ ಬೆಟ್ಟ) ಆನೆಮಲೈ, ತಿರುಪ್ಪರನ್ ಕುನ್ರಮ್, ಕೊಂಗರ್ ಪುಲಿಯಾಂಗುಲಮ್, ಅಳಗರ್‍ಮಲೈ ಮುಂತಾದ ಬೆಟ್ಟಗಳಲ್ಲಿ ಪ್ರಾಚೀನ ತಮಿಳು ಶಾಸನಗಳುಳ್ಳ ಗುಹೆಗಳಿವೆ, ಕ್ರಿ.ಪೂ. 3ನೆಯ ಶತಮಾನ ದಿಂದ ಕ್ರಿ.ಶ. 1ನೆಯ ಶತಮಾನದ ಅವಧಿಯಲ್ಲಿ ಈ ಶಾಸನಗಳು ಬರೆಯಲ್ಪಟ್ಟಿವೆ. ಅಲ್ಲಿ ಜೈನ ಸಂನ್ಯಾಸಿಗಳು ವಾಸಿಸುತ್ತಿದ್ದುದನ್ನೂ ಅವರಿಗೆ ವಣಿಕರು ದಾನಗಳನ್ನು ಕೊಟ್ಟಿದನ್ನೂ ಈ ಶಾಸನಗಳು ತಿಳಿಸುತ್ತವೆ. ಕೆಲವು ಗುಹೆಗಳಲ್ಲಿ ಜೈನತೀರ್ಥಂಕರ ಮೂರ್ತಿಗಳಿವೆ. ಸುಮಾರು 8ನೆಯ ಶತಮಾನದ ವಟ್ಟೆಳುತ್ತು ಲಿಪಿಯಲ್ಲಿ ಬರೆದ ಶಾಸನಗಳೂ ಇಲ್ಲಿವೆ. 

	ಮದುರೈ ನಗರದಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಊರಿನ ಮಧ್ಯದಲ್ಲಿರುವ ಮೀನಾಕ್ಷಿ-ಸುಂದರೇಶ್ವರ ದೇವಸ್ಥಾನ. ಪ್ರಾಚೀನ ನಗರ ಈ ದೇವಾಯಲದ ಸುತ್ತಲೂ ಹಬ್ಬಿಕೊಂಡಿತ್ತು. ಹಲವು ದೇವಾಲಯಗಳ ಪ್ರಾಕಾರಗಳ ಮೂಲಕ ಇದೊಂದು ವಿಶಾಲವಾದ ದೇವಾಲಯಗಳ ಸಂಕೀರ್ಣ ಎನಿಸಿಕೊಂಡಿದೆ. ಈ ಸಂಕೀರ್ಣತೆ, ಹಲವು ಶತಮಾನಗಳಲ್ಲಿಯ ಬೆಳವಣಿಗೆಯಿಂದ ಉಂಟಾದುದು. ಶೈವ ಪುರಾತನರಾದ ಸಂಬಂದರ್ (ಕ್ರಿ. ಶ. 7ನೆಯ ಶತಮಾನ) ಮತ್ತು ಸುಂದರರ್ (ಕ್ರಿ. ಶ. 8ನೆಯ ಶತಮಾನ) ಅವರುಗಳು ಈ ದೇವಾಲಯವನ್ನೂ-ದೇವರನ್ನೂ ಕುರಿತು ಹಾಡಿದ್ದಾರೆ. ದೇವಸ್ಥಾನದ ಬೆಳವಣಿಗೆಗೆ ಪಾಂಡ್ಯರು ಮತ್ತು ಮದುರೈ ನಾಯಕರು ವಿಶೇಷ ಭಾಗಿಗಳಾಗಿದ್ದಾರೆ. ಇಲ್ಲಿಯ ನ್ಕಾಲು ಸುಂದರ ಗೋಪುರಗಳು ದಕ್ಷಿಣಭಾರತದ ಗೋಪುರ ಪದ್ಧತಿಗೆ ಉದಾಹರಣೆಗಳು. ಇವು ಗಾರೆಯಲ್ಲಿ ಮಾಡಿದ ಶಿವಲೀಲೆಯ ಅನೇಕ ಚಿತ್ರಗಳನ್ನು ಹೊತ್ತು ನಿಂತಿವೆ. ಇಲಿಯ ಪೂರ್ವ ಹಾಗೂ ಪಶ್ಚಿಮ ಗೋಪುರಗಳನ್ನು ಪಾಂಡ್ಯರ ಕಾಲಕ್ಕೂ ಉತ್ತರ ಹಾಗೂ ದಕ್ಷಿಣ ಗೋಪುರಗಳನ್ನು ಮದುರೈ ನಾಯಕರ ಕಾಲಕ್ಕೂ ಕಟ್ಟಲಾಗಿದೆ. ದೇವಸ್ಥಾನದ ಮಧ್ಯದ ಸಹಸ್ರಸ್ತಂಭದ ಮಂಟಪದಲ್ಲಿ ಅನೇಕ ಸುಂದರ ಶಿಲ್ಪಗಳಿವೆ. ದೇವಸ್ಥಾನದಿಂದ ಪೂರ್ವಭಾಗದಲ್ಲಿದ್ದ ಹೊಸಮಂಟಪ ನಾಯಕರ ಕಾಲಕ್ಕೆ ಕಟ್ಟಿದ್ದು. ಈ ಮಂಟಪದಲ್ಲಿ ನಾಯಕರ ಮೂರ್ತಿಗಳನ್ನು ಇರಿಸಿದ್ದಾರೆ. 

	ವಿಷ್ಣುವಿಗೆಂದೇ ಮೀಸಲಾದ ಕೂಡಲ್ ಅಳಗರ್ ದೇವಾಲಯ ಮದುರೈ ನಗರದ ಇನ್ನೊಂದು ಪುರಾತನ ದೇವಸ್ಥಾನ. ಶಿಲ್ಪಸೌಂದರ್ಯದ ಪ್ರತೀಕವಾಗಿ ಇಲ್ಲಿ ಒಂದು ಅಷ್ಟಾಂಗ ವಿಮಾನವಿದೆ. 

	ತಿರುಮಲನಾಯಕನ ಕಾಲದಲ್ಲಿ ಕಟ್ಟಿದ ಆತನ ಅರಮನೆ ಈಗಲೂ ಸುಸ್ಥಿತಿಯಲ್ಲಿದೆ. ಇದರಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಪದ್ಧತಿಗಳ ಸಮ್ಮಿಶ್ರಣ ಶೈಲಿಯನ್ನು ಕಾಣಬಹುದು. ಈ ಅರಮನೆಯ ಮಧ್ಯದಲ್ಲಿ ಸುತ್ತಲೂ ಚಾವಣಿಯಿಂದ ಕೂಡಿದ ಕಮಾನುಗಳುಳ್ಳ ದೊಡ್ಡ ಬಯಲು ಮಂದಿರವಿದೆ. ಇಲ್ಲಿ ಗಾರೆಯಲ್ಲಿ ಮಾಡಿರುವ ಅಲಂಕಾರಿಕ ವಾಸ್ತು ಕೆಲಸ ಗಣನೀಯವಾದ್ದಾಗಿದೆ. ನಗರದ ಉತ್ತರದ ಅಂಚಿನಲ್ಲಿರುವ ರಾಣಿಮಂಗಮ್ಮಾಳ್ ಅರಮನೆ ಇನ್ನೊಂದು ಮುಖ್ಯ ಕಟ್ಟಡ. ಈಗ ಇಲ್ಲಿ ಗಾಂಧಿ ಸ್ಮಾರಕಗಳನ್ನು ಸಂಗ್ರಹಿಸಿಡಲಾಗಿದೆ.             
 (ಕೆ.ವಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ